"ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ."
-ಸ್ವಾಮಿ ವಿವೇಕಾನಂದ
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ರಾಷ್ಟ್ರದಲ್ಲಿ ಸ್ಥಾಪಿತ ವಾದಂತಹ ಪ್ರಪಥಮ ಹಾಗೂ ಏಕೈಕ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಯವರ "ಗ್ರಾಮ ಸ್ವರಾಜ್ಯ" ಪರಿಕಲ್ಪನೆಯನ್ನು ಸಾಕಾರಗೊಳಿಸುವುದು ಇದರ ಮೂಲ ಉದ್ದೇಶವಾಗಿದೆ. ಬೋಧನೆ, ತರಬೇತಿ ಹಾಗೂ ವಿಸ್ತರಣಾ ಕಾರ್ಯಗಳ ಮೂಲಕ ವಿಸ್ತೃತ ಹಾಗೂ ಸುಸ್ಥಿರವಾದ ಗ್ರಾಮೀಣ ಅಭಿವೃದ್ಧಿಯನ್ನು ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಸಾಧಿಸುವುದು ವಿಶ್ವವಿದ್ಯಾಲಯದ ಧೈಯವಾಗಿದೆ.
ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಜೀವನ ಮೌಲ್ಯಗಳು, ರಾಷ್ಟ್ರಭಿಮಾನ, ಧೈರ್ಯ, ಸ್ಥೈರ್ಯಗಳಂತಹ ಭಾವನೆಗಳನ್ನು ಮೂಡಿಸಲು ಹಾಗೂ ಅವರ ದೃಷ್ಟಿಕೋನದಲ್ಲಿ ಗುಣಾತ್ಮಕ ಪರಿವರ್ತನೆಯನ್ನುಂಟು ಮಾಡುವ ಹಲವು ಸಕ್ರಿಯಾತ್ಮಕ ಚಟುವಟಿಕೆಗಳನ್ನು ವಿಶ್ವವಿದ್ಯಾಲಯದಲ್ಲಿ ಕೈಗೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯದ ಹೊಸ ಆವರಣದಲ್ಲಿ ಈಗಾಗಲೇ ಮಹಾತ್ಮ ಗಾಂಧೀಜಿಯವರ ತತ್ವ ಚಿಂತನೆ ಹಾಗೂ ಆಚಾರ ವಿಚಾರಗಳನ್ನು ಆಳವಡಿಸಿಕೊಳ್ಳಲು ಸಬರಮತಿ ಆಶ್ರಮದಲ್ಲಿ ಎರಡು ವರ್ಷಗಳ ಹಿಂದೆ ಪ್ರತಿಕೃತಿಯನ್ನು ನಿರ್ಮಿಸಲಾಗಿದ್ದು, ಈ ಆಶ್ರಮವು ವಿಶ್ವವಿದ್ಯಾಲಯಕ್ಕೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಪ್ರೇರಣಾ ಕೇಂದ್ರವಾಗಿ ಪ್ರಖ್ಯಾತವಾಗಿದೆ.
ಸ್ವಾಮಿ ವಿವೇಕಾನಂದರು. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಪ್ರತೀಕವೆಂದು ಜಗದ್ವಿಖ್ಯಾತಿ ಹೊಂದಿದ್ದಾರೆ. ಪ್ರಸ್ತುತ ಈ ವೀರ ಸನ್ಯಾಸಿಯು ವಿಶ್ವವಿದ್ಯಾಲಯಕ್ಕೆ ಮತ್ತಷ್ಟು ಪ್ರೇರಣಾ ಶಕ್ತಿಯಾದ್ದಾರೆ.
ಇಂದಿನ ಯುವ ಪೀಳಿಗೆಯಲ್ಲಿ ಸುಸ್ಥಿರತೆ, ಸ್ವಾವಲಂಬನೆ, ಸ್ವಾಭಿಮಾನ ಹಾಗೂ ಭಾರತೀಯ ಪಾರಂಪರಿಕ ಆಚಾರ ವಿಚಾರಗಳ ಕುರಿತ ಅರಿವು ಮೂಡಿಸುವ ಉದ್ದೇಶದಿಂದ ವಿವೇಕಾನಂದ ಪ್ರೇರಣಾ ಕೇಂದ್ರವು - "ನಿರಾಕಾರದ ಧ್ವನಿ"ಎಂಬ ಭವ್ಯವಾದ ಸ್ಮಾರಕವನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಸಬರಮತಿ ಆಶ್ರಮಕ್ಕೆ ಹೊಂದಿಕೊAಡಿರುವ ಅಂದಾಜು ೫ ಎಕರೆ ಭೂವಿಸ್ತೀರ್ಣದಲ್ಲಿ ನಿರ್ಮಿಸಲು ಉದ್ದೇಶಿಸಿದೆ. ಕರ್ಮಯೋಗ, ಭಕ್ತಿಯೋಗ, ರಾಜಯೋಗ ಹಾಗೂ ಜ್ಞಾನಯೋಗವನ್ನು ಪ್ರತಿ ಬಿಂಬಿಸುವ ಈ ಭವ್ಯ ಸ್ಮಾರಕವು ಸೃಜನಾತ್ಮಕ ವಾಸ್ತುಶಿಲ್ಪವನ್ನು ಹೊಂದಿರುವ"ಚೈತ್ಯ ಆಕೃತಿ"ರೂಪದಲ್ಲಿರುತ್ತದೆ. ಈ ಶಿಲ್ಪವು ತೆರೆದ ಪ್ರಾಂಗಣಗಳು ಹಾಗೂ ಕಮಾನುಗಳಿಂದ ಕೂಡಿರುತ್ತದೆ, ಪ್ರಸ್ತುತ ಸಂದರ್ಭದಲ್ಲಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪ್ರಶ್ನೆಯನ್ನು ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಕೃತಕ ಬುದ್ಧಿವಂತಿಕೆ(Artificial Intelligence) & ಇಂಟರ್ನೆಟ್ ಆಫ್ ಥಿಂಗ್ಸ್ (IoT) ಗಳಂತಹ ಆತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಸ್ವಾಮಿ ವಿವೇಕಾನಂದರ ಜೀವನ ಹಾಗೂ ಕೃತಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಬಿಂಬಿಸಲಾಗುವುದು. ಇದೇ ಸ್ಥಳದಲ್ಲಿ ಸ್ವಾಮಿ ವಿವೇಕಾನಂದರ ಭವ್ಯವಾದ ಮೂರ್ತಿಯನ್ನು ಪ್ರತಿಷ್ಟಾಪಿಸುವ ಮೂಲಕ ಈ ಪ್ರದೇಶದ ಹಿರಿಮೆಯೊಂದಿಗೆ ಪ್ರಶಾಂತತೆಯನ್ನು ಇನ್ನಷ್ಟು ವಿಸ್ತರಿಸುವುದು. ಈ ಎಲ್ಲಾ ಆಕೃತಿಗಳನ್ನು ಒಳಗೊಂಡ ಪ್ರದೇಶಕ್ಕೆ “ವಿವೇಕ ಲೋಕ” ಎಂದು ಹೆಸರಿಸಲಾಗುವುದು.
ಇಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸಲು ಸಮಾನ ಮನಸ್ಸಿನಿಂದ ತನು, ಮನ ಹಾಗೂ ಧನಗಳ ರೂಪದಲ್ಲಿ ಸಹಾಯ ಹಾಗೂ ಸಹಕಾರ ಅತ್ಯವಶ್ಯಕವಾಗಿದೆ. ಈ ಕಾರ್ಯದಲ್ಲಿ ನಮ್ಮೊಂದಿಗೆ ಪೂರ್ಣ ಹೃದಯದಿಂದ ಕೈ ಜೋಡಿಸಲು ಆಗ್ರಹ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.